ಕೊಳಕಟ್ಟಿ ಹುಲ್ಲು

ಪೋಯೇಸೀ ಕುಟುಂಬಕ್ಕೆ ಸೇರಿದ ಹುಲ್ಲು. ಸೆಂಕ್ರಸ್ ಸಿಲಿಯೇರಿಸ್ ಇದರ ವೈಜ್ಞಾನಿಕ ನಾಮ. ದನಗಳಿಗೆ ಅತ್ಯುತ್ಕøಷ್ಟವಾದ ಮೇವೆಂದು ಪ್ರಸಿದ್ಧವಾಗಿದೆ. ಉಷ್ಣ ಮತ್ತು ಉಪೋಷ್ಣವಲಯಗಳ ನಿವಾಸಿ ಇದು. ಭಾರತ ಮತ್ತು ಮೆಡಿಟರೇನಿಯನ್ ಆಫ್ರಿಕದಲ್ಲಿ ಪ್ರಮುಖವಾಗಿ ಬೆಳೆಯುತ್ತದೆ.  ಇತ್ತೀಚೆಗೆ ಬರ್ಮ ಮತ್ತು ಆಸ್ಟ್ರೇಲಿಯ ದೇಶಗಳಲ್ಲೂ ಇದನ್ನು ಬೆಳೆಸಲಾಗುತ್ತಿದೆ. ಭಾರತದಲ್ಲಿ ಇದನ್ನು ಹೋಲುವ ಇತರ 7 ಪ್ರಭೇದಗಳಿವೆ. ಎಲ್ಲವನ್ನೂ ಹೆಚ್ಚಾಗಿ ಹುಲ್ಲುಗಾವಲುಗಳಲ್ಲಿ ಬೆಳೆಸುತ್ತಾರೆ.

	ಇದು ಕುಚ್ಚಾಗಿ ಮತ್ತು ಉದ್ದವಾಗಿ ಸುಮಾರು 6"-18" ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಹುಲ್ಲು. ಒಂದೊಂದು ಗಿಡದಲ್ಲೂ ಹಲವಾರು ಕವಲುಗಳಿದ್ದು ಒಂದೊಂದರಲ್ಲೂ ದಪ್ಪ ಹಾಗೂ ಉದ್ದನೆಯ ತೆನೆ ಹುಟ್ಟುತ್ತದೆ. ಇದೇ ಹೂಗೊಂಚಲು. ಪ್ರತಿ ಹೂ ಗೊಂಚಲಿನಲ್ಲಿ ಸಾವಿರಾರು ಹೂಗಳು ಒತ್ತೊತ್ತಾಗಿ ಜೋಡಣೆಗೊಂಡು ಅರಳುತ್ತವೆ. ಹೂವಿನ ಸುತ್ತ ಒಂದು ಬಟ್ಟಲಿನಾಕಾರದ ಕವಚವಿದೆ. ಇದರಲ್ಲಿ ಸೂಕ್ಷ್ಮವಾದ ಹಾಗೂ ಚೂಪು ಮತ್ತು ಸ್ವಲ್ಪ ಒರಟಾದ ಮುಳ್ಳುಕೂದಲುಗಳು ಹಿಂದುಮುಂದಾಗಿ ಹೆಣೆದುಕೊಂಡಿರುತ್ತವೆ. ಸಾಮಾನ್ಯವಾಗಿ ಈ ಹುಲ್ಲನ್ನು ಮೇಯಲಿಕ್ಕೆ ಬರುವ ದನಕರುಗಳ ಕಾಲಿಗೆ ಮತ್ತು ಬರೀ ಕಾಲಿನಿಂದ ನಡೆಯುವ ಜನರಿಗೆ ಈ ಸೂಕ್ಷ್ಮ ಮುಳ್ಳುಗಳು ಚುಚ್ಚುವುದರಿಂದ ಕಾಲುಹುಣ್ಣು ಬರುವುದೆಂದು ಹೇಳಲಾಗಿದೆ. ಉಣ್ಣೆ ಅಥವಾ ರೋಮಗಳುಳ್ಳ ಪ್ರಾಣಿ ಶರೀರಗಳಿಗೆ ಕಾಳುಗಳು ಅಂಟಿಕೊಂಡು ಉಪದ್ರವ ಕೊಡುತ್ತವೆ. ಈ ಹುಲ್ಲಿನಿಂದ ಉತ್ಪತ್ತಿಯಾದ ಮುಳ್ಳು-ಕಾಳುಗಳ ಬಗ್ಗೆ ಒಂದು ಕಥೆಯೂ ಇದೆ. ದಂಡೆತ್ತಿ ಬಂದ ಒಬ್ಬ ದೊರೆಗೆ ಕೊಳಕಟ್ಟಿಹುಲ್ಲು ದಟ್ಟವಾಗಿ ಬೆಳೆದಿದ್ದ ಪ್ರದೇಶವೊಂದು ಎದುರಾಯ್ತು. ಈ ಹುಲ್ಲಿನಿಂದ ಉಂಟಾಗುವ ಉಪದ್ರವವನ್ನು ಕಂಡುಕೇಳಿದ್ದ ಅವನು, ಆ ಪ್ರದೇಶವನ್ನು ಗೆಲ್ಲದೇ ಬಿಟ್ಟು ಓಡಿದನಂತೆ. ಈ ಹುಲ್ಲು ಮೈದಾನ ಪ್ರದೇಶಗಳಲ್ಲಿ ಬೆಳೆಯುವುದಾದರೂ ಶೈತ್ಯಾಂಶ ಕಡಿಮೆ ಇರುವ ಮತ್ತು ಮರಳು ಮಿಶ್ರಿತ ಮಣ್ಣಿರುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆ ಕಡಿಮೆ ಇದ್ದರೂ ಇದು ಹುಲುಸಾಗಿ ಬೆಳೆಯುತ್ತದೆ. ಆದರೆ ನೀರಿನ ಸೌಕರ್ಯ ಚೆನ್ನಾಗಿದ್ದರೆ ಇದರ ಇಳುವರಿ ಹೆಚ್ಚು. ಕೊಳಕಟ್ಟಿ ಹುಲ್ಲು ಅನುಕ್ರಮ ಕುಯ್ಲಿಗೆ ಹೊಂದಿಕೊಂಡಿದೆ.

	ಇದನ್ನು ಬೆಳೆಸುವಾಗ ಬೀಜಗಳನ್ನು ಒಂದು ಎಕರೆಗೆ 16-20 ಪೌಂಡಿನಂತೆ ಮುಂಗಾರು ಮಳೆಗಾಲದಲ್ಲಿ ಬಿತ್ತಬೇಕು ಮತ್ತು ಗೊಬ್ಬರವನ್ನು ಒದಗಿಸಬೇಕು. ಚೆನ್ನಾಗಿ ಬೆಳೆದಾಗ ವರ್ಷಕ್ಕೆ 30,000-50,000 ಪೌಂಡಿಗಿಂತ ಹೆಚ್ಚಾದ ಇಳುವರಿಯನ್ನು ಇದು ಕೊಡಬಲ್ಲುದು. ಕೊಳಕಟ್ಟಿಹುಲ್ಲನ್ನೆ ಹೋಲುವ ಸೆಂಕ್ರಸ್ ಪೆನಿಸಿಟಿಫಾರ್ಮಿಸ್ ಎಂಬ ಮತ್ತೊಂದು ಪ್ರಭೇದ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದು, ನೀರು ಹಾಯಿಸಿ ಬೆಳೆಸಿದಾಗ ಎಕರೆಗೆ ಸುಮಾರು 11,400 ಪೌಂ. ಹಸಿರುಮೇವನ್ನು ಕೊಡಬಲ್ಲುದೆಂದು ಪ್ರಯೋಗಗಳಿಂದ ತಿಳಿದುಬಂದಿದೆ. ದಕ್ಷಿಣ ಭಾರತದಲ್ಲಿ ಈ ಹುಲ್ಲುಗಾವಲು ಪ್ರದೇಶಗಳನ್ನು 5-40 ವರ್ಷಗಳವರೆವಿಗೂ ಕಾಪಾಡಿಕೊಳ್ಳಬಹುದುದಾಗಿದೆ. ಆಗಾಗ್ಗೆ ಕ್ರಮವಾಗಿ ದನಕರುಗಳನ್ನು ಹುಲ್ಲುಗಾವಲಿಗೆ ಬಿಟ್ಟು ಮೇಯಿಸುವ ಪದ್ಧತಿ ಇದೆ.

	ಕೊಳಕಟ್ಟಿಹುಲ್ಲನ್ನು ಹಸಿಯಾಗಿ ಅಥವಾ ಒಣಗಿಸಿ ಅಥವಾ ಕಾದಿಟ್ಟ ಹಗೇವು ಮೇವುಮಾಡಿ (ಸೈಲೇಜ್) ಉಪಯೋಗಿಸಬಹುದು. ಇದು ಮೇವಾಗಿ ಉಪಯೋಗವಾಗುವ ಇತರ ಹುಲ್ಲು ಜಾತಿಗಳಿಗಿಂತ ಹೆಚ್ಚಾದ ಆಹಾರಾಂಶವನ್ನೊಳಗೊಂಡಿದೆ. ಪ್ರತಿ 100 ಪೌಂ. ಒಣಹುಲ್ಲಿನಲ್ಲಿ 1.70 ರಿಂದ 11.17 ಪೌಂ.ನಷ್ಟು ಕಚ್ಚಾ ಪ್ರೋಟೀನುಗಳು, 47.54-49.46 ಪೌಂ.ನಷ್ಟು ಕಾರ್ಬೊಹೈಡ್ರೇಟುಗಳು, 0.16-0.43 ಪೌಂ. ನಷ್ಟು ಈಥರ್ ಸಂಬಂಧವಸ್ತುಗಳು ಇರುವುದು ಕಂಡುಬಂದಿದೆ. ಕೊಳಕಟ್ಟಿಹುಲ್ಲನ್ನು ತಿಂದ ಹಸುಗಳು ಹಾಲನ್ನು ಹೆಚ್ಚಾಗಿ ಕೊಡುವುವಲ್ಲದೆ ಅವುಗಳ ದೇಹ ನುಣುಪಾಗಿ ಹೊಳೆಯುವಂತಾಗುತ್ತದೆ.

	ಈ ಹುಲ್ಲಿನ ಕಾಳುಗಳನ್ನು ಕ್ಷಾಮಕಾಲದಲ್ಲಿ ಜನ ತಿನ್ನುತ್ತಾರೆ. 
(ಕೆ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ